كل أسفار ಕನ್ನಡ IRV

1 ಯೋಹಾನನು 1

ಕನ್ನಡ IRV · الأصحاح 1

5 أصحاحات

ಕನ್ನಡ IRV / 1 ಯೋಹಾನನು / الأصحاح 1

ಕನ್ನಡ IRV · الأصحاح 1

1 ¶ ನಾವು ನಿಮಗೆ ಪ್ರಚುರಪಡಿಸುವ ಜೀವವಾಕ್ಯವು ಆದಿಯಿಂದ ಇದ್ದದ್ದು. ನಾವು ಅದನ್ನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು, ಮನಸ್ಸಿಟ್ಟು ಗ್ರಹಿಸಿ ಕೈಯಿಂದ ಮುಟ್ಟಿದ್ದೂ ಆಗಿರುವಂತದ್ದು.

2 ಆ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತಿದ್ದೇವೆ.

3 ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಸೇರಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ. ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರುವಂಥದ್ದಾಗಿದೆ.

4 ನಿಮ್ಮ ಸಂತೋಷವು ಪರಿಪೂರ್ಣವಾಗಬೇಕೆಂದು ನಾವು ಇವುಗಳನ್ನು ನಿಮಗೆ ಬರೆಯುತ್ತಿದ್ದೇವೆ.

5 ¶ ನಾವು ಆತನಿಂದ ಕೇಳಿ ನಿಮಗೆ ತಿಳಿಸುತ್ತಿರುವ ಸಂದೇಶ ಯಾವುದೆಂದರೆ; ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಸ್ವಲ್ಪವೂ ಕತ್ತಲೆಯಿಲ್ಲ ಎಂಬುದೇ.

6 ನಾವು ದೇವರೊಂದಿಗೆ ಅನ್ಯೋನ್ಯತೆಯುಳ್ಳವರಾಗಿದ್ದೇವೆಂದು ಹೇಳಿಕೊಳ್ಳುತ್ತಾ ಕತ್ತಲೆಯಲ್ಲಿ ನಡೆದರೆ ಸುಳ್ಳಾಡುವವರಾಗಿದ್ದೇವೆ, ಸತ್ಯವನ್ನನುಸರಿಸುತ್ತಿಲ್ಲ ಎಂದು ತಿಳಿದು ಬರುತ್ತದೆ.

7 ಆದರೆ ಆತನು ಬೆಳಕಿನಲ್ಲಿರುವಂತೆಯೇ ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲ್ಲೊಬ್ಬರು ಅನ್ಯೋನ್ಯತೆಯಲ್ಲಿರುತ್ತೇವೆ. ಆತನ ಒಬ್ಬನೇ ಕುಮಾರನಾದ ಯೇಸುವಿನ ರಕ್ತವು ನಮ್ಮನ್ನು ಸಕಲ ಪಾಪದಿಂದ ಬಿಡಿಸಿ ಶುದ್ಧೀಕರಿಸುತ್ತದೆ.

8 ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಗೊಳಿಸಿಕೊಂಡ ಹಾಗಾಯಿತು ಮತ್ತು ಸತ್ಯವೆಂಬುದು ನಮ್ಮಲ್ಲಿಲ್ಲವೆಂದು ತಿಳಿಯುತ್ತದೆ.

9 ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವನು.

10 ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ಆತನನ್ನು ಸುಳ್ಳುಗಾರನನ್ನಾಗಿ ಮಾಡಿದಂತಾಗುತ್ತದೆ ಮತ್ತು ಆತನ ವಾಕ್ಯವು ನಮ್ಮಲ್ಲಿ ನೆಲೆಗೊಂಡಿರುವುದಿಲ್ಲ.