ಕನ್ನಡ IRV / 2 ಪೂರ್ವಕಾಲವೃತ್ತಾ / ಅಧ್ಯಾಯ 3
ಕನ್ನಡ IRV · chapter 3
1 ¶ ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ, ಯೆಹೋವನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ಆಲಯವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು. ಇದು ಮುಂಚೆ ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು ದಾವೀದನು ಇದಕ್ಕೋಸ್ಕರ ಸಿದ್ಧಮಾಡಿದ್ದನು.
2 ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಅದನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು.
3 ಸೊಲೊಮೋನನು ಕಟ್ಟಿಸಿದ ದೇವಾಲಯದ ಅಸ್ತಿವಾರದ ಉದ್ದವು ಮೊದಲಿದ್ದ ಮೊಳದ ಪ್ರಕಾರ ಅರುವತ್ತು ಮೊಳ ಉದ್ದವೂ, ಇಪ್ಪತ್ತು ಮೊಳ ಅಗಲವು ಆಗಿತ್ತು.
4 ದೇವಾಲಯದ ಮುಂಭಾಗದಲ್ಲಿದ್ದ ಮಂಟಪದ ಉದ್ದವು ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಎತ್ತರವು ಇಪ್ಪತ್ತು ಮೊಳ ಆಗಿತ್ತು. ಸೊಲೊಮೋನನು ಅದರ ಒಳಭಾಗವನ್ನು ಶುದ್ಧ ಬಂಗಾರದ ತಗಡಿನಿಂದ ಹೊದಿಸಿದನು.
5 ದೊಡ್ಡ ಕೋಣೆಯನ್ನು ತುರಾಯಿ ಮರದ ಹಲಗೆಗಳಿಂದ ಮುಚ್ಚಿ, ಅದನ್ನು ಶುದ್ಧ ಬಂಗಾರದಿಂದ ಹೊದಿಸಿ, ಆದರ ಹಲಗೆಗಳ ಮೇಲೆ ಖರ್ಜೂರದ ಮರಗಳನ್ನೂ ಬಳ್ಳಿಗಳನ್ನೂ ಸರಪಣಿಗಳನ್ನು ಕೆತ್ತಿಸಿದನು.
6 ಅಮೂಲ್ಯವಾದ ರತ್ನದ ಕಲ್ಲುಗಳಿಂದ ಅಲಯವನ್ನು ಅಲಂಕರಿಸಿದನು. ಆದರ ಬಂಗಾರವು ಪರ್ವಯಿಮ್ ದೇಶದ ಬಂಗಾರವಾಗಿತ್ತು.
7 ಹೀಗೆ ಆಲಯದಲ್ಲಿನ ತೊಲೆಗಳನ್ನೂ, ಹೊಸ್ತಿಲುಗಳನ್ನು, ಗೋಡೆಗಳನ್ನೂ, ಬಾಗಿಲುಗಳನ್ನೂ ಬಂಗಾರದಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.
8 ¶ ಇದಲ್ಲದೆ ಅವನು ಮಹಾಪರಿಶುದ್ಧ ಸ್ಥಳವನ್ನು ಕಟ್ಟಿಸಿದನು. ಅದರ ಉದ್ದವು, ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ; ಅದರ ಅಗಲವೂ ಇಪ್ಪತ್ತು ಮೊಳವಾಗಿತ್ತು. ಅದನ್ನು ಆರುನೂರು ತಲಾಂತು ಚೊಕ್ಕ ಬಂಗಾರದಿಂದ ಹೊದಿಸಿದನು.
9 ಬಂಗಾರದ ಮೊಳೆಗಳ ತೂಕ ಐವತ್ತು ತೊಲವಾಗಿತ್ತು. ಮೇಲುಪ್ಪರಿಗೆಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು.
10 ಮಹಾಪರಿಶುದ್ಧ ಸ್ಥಳದಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳನ್ನು ಮಾಡಿಸಿದನು; ಅವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು.
11 ಕೆರೂಬಿಗಳ ರೆಕ್ಕೆಗಳು ಒಟ್ಟು ಇಪ್ಪತ್ತು ಮೊಳ ಉದ್ದವಾಗಿದ್ದವು. ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು; ಐದು ಮೊಳ ಉದ್ದವಾದ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು.
12 ಅದರಂತೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಐದು ಮೊಳ ಉದ್ದವಾಗಿದ್ದು, ಅದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು.; ಇನ್ನೊಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು.
13 ಈ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಉದ್ದಕ್ಕೆ ಚಾಚಿಕೊಂಡಿದ್ದವು. ಕೆರೂಬಿಗಳು ತಮ್ಮ ಕಾಲುಗಳ ಮೇಲೆ ನಿಂತುಕೊಂಡು, ಪರಿಶುದ್ಧ ಸ್ಥಳದ ಕಡೆಗೆ ಮುಖಮಾಡಿದ್ದವು.
14 ಸೊಲೊಮೋನನು ಪರದೆಯನ್ನು ನೀಲ, ಧೂಮ್ರ, ರಕ್ತವರ್ಣಗಳುಳ್ಳ ನಯವಾದ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳ ಕಸೂತಿಯನ್ನು ಹಾಕಿಸಿದನು.
15 ¶ ಇದಲ್ಲದೆ ದೇವಾಲಯದ ಮುಂದೆ ಎರಡು ಸ್ತಂಭಗಳನ್ನು ನಿಲ್ಲಿಸಿದನು, ಅವು ಮೂವತ್ತೈದು ಮೊಳ (5.5 ಮೀಟರ್) ಎತ್ತರವಾಗಿದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ಐದು ಮೊಳ ಎತ್ತರವಾಗಿದ್ದವು.
16 ಸೊಲೊಮೋನನು ಗರ್ಭಗೃಹದ ಸರಪಣಿಗಳಂತೆ ಹಾರಗಳನ್ನು ಮಾಡಿಸಿ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕೆತ್ತಿಸಿ ಕಟ್ಟಿಸಿದನು.
17 ಸ್ತಂಭಗಳನ್ನು ದೇವಾಲಯದ ಮುಂಭಾಗದಲ್ಲಿ, ಒಂದನ್ನು ಬಲಗಡೆಗೂ, ಇನ್ನೊಂದನ್ನು ಎಡಗಡೆಗೂ ನಿಲ್ಲಿಸಿದನು. ಬಲಗಡೆಯ ಕಂಬಕ್ಕೆ “ಯಾಕೀನ್” ಎಂದೂ ಎಡಗಡೆಯಿದ್ದ ಕಂಬಕ್ಕೆ “ಬೋವಜ್” ಎಂದೂ ಹೆಸರಿಟ್ಟನು.