ಕನ್ನಡ IRV / 2 ಕೊರಿಂಥದವರಿಗೆ / ಅಧ್ಯಾಯ 13
ಕನ್ನಡ IRV · chapter 13
1 ¶ ನಾನು ನಿಮ್ಮ ಬಳಿಗೆ ಮೂರನೆಯ ಸಾರಿ ಬರುತ್ತಿದ್ದೇನೆ. “ಯಾವ ದೂರಿದ್ದರೂ ಅದಕ್ಕೆ ಇಬ್ಬರು ಮೂವರು ಸಾಕ್ಷಿಗಳ ಆಧಾರವಿರಬೇಕು,” ಎಂದು ಲಿಖಿತವಾಗಿದೆ.
2 ನಾನು ಎರಡನೆಯ ಸಾರಿ ನಿಮ್ಮಲ್ಲಿದ್ದಾಗ ತಿರುಗಿ ಬಂದರೆ ನಿಮ್ಮನ್ನು ಶಿಕ್ಷಿಸದೆ ಬಿಡುವುದಿಲ್ಲವೆಂದು ಹೇಗೆ ಹೇಳಿದೆನೋ, ಹಾಗೆಯೇ ಈಗಲೂ ನಿಮಗೆ: ಪೂರ್ವ ಪಾಪಕೃತ್ಯಗಳನ್ನು ಇನ್ನೂ ನಡಿಸುವವರಿಗೂ ಮತ್ತು ಮಿಕ್ಕಾದವರೆಲ್ಲರಿಗೂ ಹೇಳುತ್ತೇನೆ.
3 ಕ್ರಿಸ್ತನು ನನ್ನಲ್ಲಿ ಮಾತನಾಡುತ್ತಾನೆಂಬುವುದಕ್ಕೆ ನೀವು ಸಾಕ್ಷಿ ಕೇಳಿದ್ದರಿಂದ ನಾನು ಹೀಗೆ ಹೇಳುತ್ತೇನೆ. ಆತನು ನಿಮ್ಮನ್ನು ಕುರಿತು ದುರ್ಬಲನಾಗಿರದೆ ಶಕ್ತನೇ ಆಗಿದ್ದಾನೆ. ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ.
4 ಆತನು ಬಲಹೀನಾವಸ್ಥೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟನು ನಿಜ; ಆದರೂ ದೇವರ ಬಲದಿಂದ ಜೀವಿಸುವವನಾಗಿದ್ದಾನೆ. ನಾವೂ ಸಹ ಆತನ ಬಲಹೀನಾವಸ್ಥೆಯಲ್ಲಿ ಪಾಲುಗಾರರಾಗಿದ್ದೇವೆ, ಆದರೂ ಆತನೊಂದಿಗೆ ದೇವರ ಬಲದಿಂದ ನಿಮಗಾಗಿ ಬದುಕುವವರಾಗಿದ್ದೇವೆ.
5 ¶ ನೀವು ಕ್ರಿಸ್ತ ನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ನೀವೇ ಪರಿಶೋಧಿಸಿಕೊಳ್ಳಿರಿ. ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದು ನಿಮಗೆ ತಿಳಿಯುವುದಿಲ್ಲವೋ? ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಆಯೋಗ್ಯರೇ.
6 ನಾವಂತೂ ಆಯೋಗ್ಯರಲ್ಲವೆಂದು ನಿಮಗೆ ಗೊತ್ತಾಗುವುದೆಂಬುದಾಗಿ ನನಗೆ ಭರವಸೆವುಂಟು.
7 ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಆ ಪರೀಕ್ಷೆಗೆ ಒಳ್ಳಗಾದವರೆಂದು ತೋರಿ ಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಆ ಪರೀಕ್ಷೆಗೆ ಒಳ್ಳಗಾದವರೆನಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವವರಾಗಬೇಕೆಂಬುದೇ ನಮ್ಮ ಉದ್ದೇಶ.
8 ಸತ್ಯಕ್ಕೆ ವಿರೋಧವಾಗಿ ನಾವೇನೂ ಮಾಡಲಾರೆವು, ಸತ್ಯಾಭಿವೃದ್ದಿಗೋಸ್ಕರವೇ ಸಮಸ್ತವನ್ನು ಮಾಡುತ್ತೇವೆ.
9 ನಾವು ಬಲಹೀನರಾಗಿದ್ದರೂ ನೀವು ಬಲಿಷ್ಠರಾಗಿದ್ದ ಪಕ್ಷಕ್ಕೆ ಸಂತೋಷಪಡುತ್ತೇವೆ; ಇದಲ್ಲದೆ ನೀವು ಪೂರ್ಣ ಕ್ರಮಕ್ಕೆ ಬರಬೇಕೆಂದು ಪ್ರಾರ್ಥಿಸುತ್ತೇವೆ.
10 ¶ ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗಲೇ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಬದಲಾಗಿ ಕಟ್ಟುವುದಕ್ಕಾಗಿಯೇ ಬರೆದಿದ್ದೇನೆ. ಕರ್ತನು ನನಗೆ ಕೊಟ್ಟಿರುವ ಅಧಿಕಾರದ ಪ್ರಯೋಗದಲ್ಲಿ ನಿಮ್ಮ ಬಳಿಗೆ ಬಂದಾಗ ಕಾಠಿಣ್ಯವನ್ನು ತೋರಿಸುವುದಕ್ಕೆ ಅವಕಾಶವಿರಬಾರದೆಂದು ಇದನ್ನು ಬರೆಯುತ್ತಿದ್ದೇನೆ.
11 ¶ ಕಡೆಯದಾಗಿ ಸಹೋದರರೇ, ಸಂತೋಷಪಡಿರಿ! ಕ್ರಮಪಡಿಸಿಕೊಳ್ಳಿರಿ. ಧೈರ್ಯವುಳ್ಳವರಾಗಿರಿ, ಏಕ ಮನಸ್ಸುಳ್ಳವರಾಗಿರಿ, ಸಮಾಧಾನದಿಂದ ಇರಿ; ಆಗ ಪ್ರೀತಿಸ್ವರೂಪನೂ, ಶಾಂತಿದಾಯಕನೂ ಆದ ದೇವರು ನಿಮ್ಮ ಸಂಗಡ ಇರುವನು.
12 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
13 ದೇವಜನರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ.
14 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ, ದೇವರ ಪ್ರೀತಿಯೂ, ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ.