All books in ಕನ್ನಡ IRV

ಮಾರ್ಕನು 16

ಕನ್ನಡ IRV · chapter 16

16 ಅಧ್ಯಾಯಗಳು

ಕನ್ನಡ IRV / ಮಾರ್ಕನು / ಅಧ್ಯಾಯ 16

ಕನ್ನಡ IRV · chapter 16

1 ¶ ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಮತ್ತು ಸಲೋಮಿಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧ ದ್ರವ್ಯಗಳನ್ನು ಕೊಂಡರು.

2 ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು.

3 ¶ “ಸಮಾಧಿಯ ಬಾಗಿಲಿನಿಂದ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.

4 ಸಮಾಧಿಯ ಕಡೆಗೆ ನೋಡಿದಾಗ ಆ ದೊಡ್ಡ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡರು.

5 ಅವರು ಸಮಾಧಿಯೊಳಗೆ ಹೋಗಿ, ಒಬ್ಬ ಯೌವನಸ್ಥನು ಬಿಳಿ ನಿಲುವಂಗಿಯನ್ನು ಧರಿಸಿಕೊಂಡು ಬಲ ಭಾಗದಲ್ಲಿ ಕುಳಿತಿರುವುದನ್ನು ಕಂಡು ಬೆಚ್ಚಿಬೆರಗಾದರು.

6 ¶ ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟಿದ್ದ ನಜರೇತಿನ ಯೇಸುವನ್ನು ಹುಡುಕುತ್ತಿರಲ್ಲವೇ. ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ; ಆತನನ್ನು ಇಟ್ಟಿದ್ದ ಸ್ಥಳ ಇದೇ ನೋಡಿರಿ,

7 ಆದರೆ ನೀವು ಹೋಗಿ ಆತನ ಶಿಷ್ಯರಿಗೂ ಪೇತ್ರನಿಗೂ ಆತನು ನಿಮಗೆ ಹೇಳಿದಂತೆ ನಿಮಗಿಂತ ಮೊದಲು ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ” ಎಂದು ಹೇಳಿದನು.

8 ¶ ಅವರು ವಿಸ್ಮಯಗೊಂಡು ನಡುಗುತ್ತಾ ಹೊರಕ್ಕೆ ಬಂದು ಸಮಾಧಿಯ ಬಳಿಯಿಂದ ಓಡಿಹೋದರು; ಅವರು ಹೆದರಿಕೊಂಡಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.

9 ¶ ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆತನು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದ್ದನು.

10 ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಅವರು ಶೋಕಿಸುತ್ತಾ ಅಳುತ್ತಿದ್ದರು.

11 “ಆತನು ಬದುಕಿದ್ದಾನೆ ನನಗೆ ಕಾಣಿಸಿಕೊಂಡನು” ಎಂದು ಅವಳು ಹೇಳಿದ ಮಾತನ್ನು ಅವರು ನಂಬಲಿಲ್ಲ.

12 ¶ ಇದಾದ ಮೇಲೆ ಶಿಷ್ಯರಲ್ಲಿ ಇಬ್ಬರು ಊರಿಗೆ ಪ್ರಯಾಣ ಮಾಡುತ್ತಿರುವಾಗ ಆತನು ಅವರಿಗೆ ಬೇರೆ ರೂಪದಲ್ಲಿ ಕಾಣಿಸಿಕೊಂಡನು.

13 ಅವರು ಹೋಗಿ ಉಳಿದ ಶಿಷ್ಯರಿಗೆ ತಿಳಿಸಿದರು. ಆದರೆ ಶಿಷ್ಯರು ಅವರನ್ನೂ ನಂಬಲಿಲ್ಲ.

14 ¶ ಅನಂತರ ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕುಳಿತಿದ್ದಾಗ ಆತನು ಅವರಿಗೂ ಕಾಣಿಸಿಕೊಂಡನು. ತಾನು ಜೀವಿತನಾಗಿ ಎದ್ದು ಬಂದ ಮೇಲೆ ತನ್ನನ್ನು ನೋಡಿದವರ ಮಾತನ್ನು ಅವರು ನಂಬಲಿಲ್ಲವಾದ ಕಾರಣ ಆತನು ಅವರ ಅಪನಂಬಿಕೆಗೂ ಅವರ ಮನಸ್ಸಿನ ಕಾಠಿಣ್ಯಕ್ಕೂ ಅವರನ್ನು ಗದರಿಸಿದನು.

15 ಆ ಮೇಲೆ ಅವರಿಗೆ, ‹“ನೀವು ಲೋಕದ ಎಲ್ಲಾ ಕಡೆಗಳಿಗೂ ಹೋಗಿ ಸೃಷ್ಟಿಗಳಿಗೆಲ್ಲಾ ಸುವಾರ್ತೆಯನ್ನು ಸಾರಿರಿ.›

16 ‹ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನಂಬದೇ ಹೋಗುವವನು ದಂಡನೆಗೆ ಗುರಿಯಾಗುವನು.›

17 ¶ ‹“ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು;›

18 ‹ಹಾವುಗಳನ್ನು ಕೈಗಳಿಂದ ಎತ್ತಿಕೊಳ್ಳುವರು; ವಿಷಪದಾರ್ಥಗಳನ್ನೇನಾದರು ಕುಡಿದರೂ ಅವರಿಗೆ ಯಾವ ಹಾನಿಯೂ ಆಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಸ್ವಸ್ಥವಾಗುವುದು”› ಎಂದು ಹೇಳಿದನು.

19 ¶ ಕರ್ತನಾದ ಯೇಸು ಅವರೊಂದಿಗೆ ಮಾತನಾಡಿದ ಮೇಲೆ ಪರಲೋಕಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು.

20 ಅನಂತರ ಅವರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ದೃಢಪಡಿಸುತ್ತಾ ಇದ್ದನು.