All books in ಕನ್ನಡ IRV

ಕೀರ್ತನೆಗಳು 4

ಕನ್ನಡ IRV · chapter 4

150 ಅಧ್ಯಾಯಗಳು

1 ನ್ಯಾಯವನ್ನು ಸ್ಥಾಪಿಸುವ ನನ್ನ ದೇವರೇ, ನಿನಗೆ ಮೊರೆಯಿಡುತ್ತೇನೆ; ಸದುತ್ತರವನ್ನು ದಯಪಾಲಿಸು. ನನ್ನನ್ನು ಅಪತ್ತಿನಿಂದ ಬಿಡಿಸಿ, ಸುರಕ್ಷಿತ ಸ್ಥಳದಲ್ಲಿ ಸೇರಿಸಿದಾತನೇ, ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಆಲಿಸು.

2 ಜನರೇ, ನೀವು ಎಷ್ಟರವರೆಗೆ ನನ್ನ ಗೌರವವನ್ನು ಕೆಡಿಸುವಿರಿ, ಎಷ್ಟರವರೆಗೆ ನನ್ನನ್ನು ಅವಮಾನಪಡಿಸುವಿರಿ? ಎಷ್ಟರವರೆಗೆ ವ್ಯರ್ಥವಾದದ್ದನ್ನು ಪ್ರೀತಿಸಿ ಸುಳ್ಳನ್ನು ಹಿಂಬಾಲಿಸುವಿರಿ? ಸೆಲಾ

3 ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆ ಎಂದು ತಿಳಿದುಕೊಳ್ಳಿರಿ. ನಾನು ಆತನಿಗೆ ಮೊರೆಯಿಡುವಾಗೆಲ್ಲಾ ಆತನು ಕೇಳುತ್ತಾನೆ.

4 ಭಯಪಡಿರಿ, ಪಾಪಮಾಡಬೇಡಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ ಮತ್ತು ಮೌನವಾಗಿರಿ. ಸೆಲಾ

5 ನ್ಯಾಯವಾದ ಯಜ್ಞಗಳನ್ನು ಸಮರ್ಪಿಸಿರಿ; ಯೆಹೋವನಲ್ಲಿಯೇ ಭರವಸವಿಡಿರಿ.

6 “ನಮಗೆ ಒಳ್ಳೆಯದನ್ನು ಮಾಡುವವರು ಯಾರಿದ್ದಾರೆ?” ಎಂದು ಅನೇಕರು ಹೇಳಿಕೊಳ್ಳುತ್ತಾರೆ. ಯೆಹೋವನೇ, ನೀನು ಪ್ರಸನ್ನಮುಖದಿಂದ ನಮ್ಮನ್ನು ನೋಡಬೇಕು.

7 ಧಾನ್ಯದ್ರಾಕ್ಷಿಗಳು ಸಮೃದ್ಧಿಯಾಗಿ ಬೆಳೆದ ಸುಗ್ಗಿ ಕಾಲದಲ್ಲಿ ಜನರಿಗಾಗುವ ಸಂತೋಷಕ್ಕಿಂತಲೂ ನೀನು ನನ್ನ ಹೃದಯದಲ್ಲಿ ಹೆಚ್ಚಾದ ಆನಂದವನ್ನು ಉಂಟುಮಾಡಿದ್ದೀ.

8 ನಾನು ನಿರ್ಭಯವಾಗಿರುವುದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು. ಏಕೆಂದರೆ ಯೆಹೋವನೇ, ನನಗೆ ಯಾವ ಅಪಾಯವೂ ಬಾರದಂತೆ ನೀನು ನನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೀ.