ಕನ್ನಡ IRV / ಕೀರ್ತನೆಗಳು / ಅಧ್ಯಾಯ 95
ಕನ್ನಡ IRV · chapter 95
1 ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ; ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ.
2 ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ; ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ.
3 ಯೆಹೋವನು ಮಹಾದೇವರೂ, ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ.
4 ಭೂಮಿಯ ಅಗಾಧವು ಆತನ ಕೈಯಲ್ಲಿರುತ್ತದೆ; ಪರ್ವತಶಿಖರಗಳು ಆತನವೇ.
5 ಆತನೇ ಸಮುದ್ರವನ್ನು ನಿರ್ಮಿಸಿದವನು; ಅದು ಆತನದೇ, ಒಣನೆಲವು ಆತನ ಕೈಕೆಲಸವೇ.
6 ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ.
7 ಆತನು ನಮ್ಮ ದೇವರು; ನಾವೋ ಆತನು ಪಾಲಿಸುವ ಪ್ರಜೆಯೂ, ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು.
8 ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ, ಮಸ್ಸಾದಲ್ಲಿ ಮಾಡಿದ ದಿನದಂತೆ, ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ.
9 ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು; ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಪರಿಶೋಧಿಸಿದರು.
10 ನಾನು ನಲ್ವತ್ತು ವರ್ಷ ಆ ಸಂತತಿಯವರ ವಿಷಯದಲ್ಲಿ ಬೇಸರಗೊಂಡೆನು; “ಈ ಜನರು ಹೃದಯದಲ್ಲಿ ತಪ್ಪಿಹೋಗುವವರು, ನನ್ನ ಆಜ್ಞೆಗಳಿಗೆ ವಿಧೇಯರಾಗದವರು” ಎಂದು ಹೇಳಿದೆನು.
11 ಆದುದರಿಂದ ಇವರು, “ನನ್ನ ವಿಶ್ರಾಂತಿಯಲ್ಲಿ ಸೇರಬಾರದು” ಎಂದು ಕೋಪಗೊಂಡು ಪ್ರಮಾಣಮಾಡಿದೆನು.