كل أسفار ಕನ್ನಡ IRV

ಆದಿಕಾಂಡ 36

ಕನ್ನಡ IRV · الأصحاح 36

50 أصحاحات

ಕನ್ನಡ IRV / ಆದಿಕಾಂಡ / الأصحاح 36

ಕನ್ನಡ IRV · الأصحاح 36

1 ¶ ಎದೋಮ್ ಎಂಬ ಏಸಾವನ ವಂಶಾವಳಿ ಇದು:

2 ¶ ಏಸಾವನು ಕಾನಾನ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡನು. ಅವರು ಯಾರೆಂದರೆ, ಹಿತ್ತಿಯನಾದ ಏಲೋನನ ಮಗಳಾಗಿದ್ದ ಆದಾ, ಹಿವ್ವಿಯನಾದ ಸಿಬಿಯೋನನ ಮಗಳಾದ ಅನಾಹಳ ಮಗಳು ಒಹೊಲೀಬಾಮಳನ್ನು,

3 ಮತ್ತು ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು.

4 ¶ ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು.

5 ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನೂ, ಕೋರಹನನ್ನು ಹೆತ್ತಳು. ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಮಕ್ಕಳು ಇವರೇ.

6 ¶ ತರುವಾಯ ಏಸಾವನು ತನ್ನ ಹೆಂಡತಿಯರನ್ನೂ, ಗಂಡುಹೆಣ್ಣು ಮಕ್ಕಳನ್ನೂ, ತನ್ನ ಮನೆಗೆ ಸೇರಿದ ಸೇವಕರೆಲ್ಲರನ್ನೂ, ತನಗಿದ್ದ ಎಲ್ಲಾ ಪಶುಪ್ರಾಣಿಗಳ ಹಿಂಡುಗಳನ್ನೂ ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮನಾದ ಯಾಕೋಬನ ಬಳಿಯಿಂದ ಬೇರೆ ದೇಶಕ್ಕೆ ಹೊರಟುಹೋದನು.

7 ಅವರ ಸಂಪತ್ತು ಹೆಚ್ಚಿದ್ದದರಿಂದ ಅವರಿಬ್ಬರೂ ಒಂದೇ ಸ್ಥಳದಲ್ಲಿರುವುದಕ್ಕೆ ಸಾಧ್ಯವಿರಲಿಲ್ಲ. ಅವರಿಗೆ ಪಶುಪ್ರಾಣಿಗಳು ಬಹಳವಾಗಿದ್ದುದರಿಂದ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.

8 ಹೀಗೆ ಏಸಾವನು ಸೇಯೀರ್ ಬೆಟ್ಟದ ಸೀಮೆಗೆ ಹೋಗಿ ಅಲ್ಲೇ ವಾಸವಾಗಿದ್ದನು. ಏಸಾವನೆಂದರೆ ಎದೋಮನು.

9 ¶ ಸೇಯೀರ್ ಬೆಟ್ಟದ ಸೀಮೆಯಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶದ ಚರಿತ್ರೆ:

10 ¶ ಏಸಾವನ ಮಕ್ಕಳ ಹೆಸರುಗಳು ಯಾವುವೆಂದರೆ: ಎಲೀಫಜನು, ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಗನು. ರೆಗೂವೇಲನು ಏಸಾವನ ಹೆಂಡತಿಯಾದ ಬಾಸೆಮತಳ ಮಗನು.

11 ¶ ಎಲೀಫಜನ ಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಗತಾಮ್, ಕೆನೆಜ್,

12 ¶ ತಿಮ್ನ ಎಂಬವಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿಯಾಗಿದ್ದು ಆಕೆಯು ಅವನಿಗೆ ಅಮಾಲೇಕನನ್ನು ಹೆತ್ತಳು. ಇವರೇ ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಕ್ಕಳು.

13 ¶ ರೆಗೂವೇಲನ ಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮಾ ಮಿಜ್ಜಾ ಇವರು ಏಸಾವನ ಹೆಂಡತಿಯಾದ ಬಾಸೆಮತಳ ಪುತ್ರರು.

14 ¶ ಏಸಾವನ ಹೆಂಡತಿಯಾದ ಸಿಬಿಯೋನನ ಮಗಳಾದ ಅನಾಹನ ಮಗಳಾದ ಒಹೊಲೀಬಾಮಳ ಮಕ್ಕಳು ಯಾರೆಂದರೆ: ಯೆಗೂಷ್ ವಂಶಸ್ಥರನ್ನು, ಯಳಾಮ ಕೋರಹ ಇವರನ್ನು ಹೆತ್ತಳು.

15 ¶ ಏಸಾವನ ಪುತ್ರರ ಮುಖಂಡರು ಯಾರೆಂದರೆ: ಏಸಾವನ ಚೊಚ್ಚಲ ಮಗನಾದ ಎಲೀಫಜನಿಂದ ಹುಟ್ಟಿದವರು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಕೆನೆಜ್,

16 ಕೋರಹ, ಗತಾಮ್, ಅಮಾಲೇಕ್, ಇವರೇ, ಈ ಕುಲಪತಿಗಳು ಎದೋಮ್ಯರ ದೇಶದಲ್ಲಿದ್ದ ಎಲೀಫಜನಿಂದ ಬಂದವರು. ಇವರು ಆದಾಳ ಮೊಮ್ಮಕ್ಕಳು.

17 ¶ ಏಸಾವನ ಮಗನಾದ ರೆಗೂವೇಲನಿಗೆ ಹುಟ್ಟಿದವರು ಯಾರೆಂದರೆ: ನಹತ್, ಜೆರಹ, ಶಮ್ಮಾ, ಮಿಜ್ಜಾ ಎಂಬ ಕುಲನಾಯಕರು ಹುಟ್ಟಿದರು. ಇವರು ಎದೋಮ್ಯರ ದೇಶದಲ್ಲಿ ಏಸಾವನ ಹೆಂಡತಿಯಾದ ಬಾಸೆಮತಳಿಗೆ ಹುಟ್ಟಿದ ಮೊಮ್ಮಕ್ಕಳು.

18 ¶ ಏಸಾವನ ಹೆಂಡತಿಯಾಗಿದ್ದ ಒಹೊಲೀಬಾಮಳ ಮಗಳಾದ ಅನಾಳ ಸಂತಾನದ ಕುಲನಾಯಕರು ಯಾರೆಂದರೆ: ಯೆಗೂಷ್, ಯಳಾಮ, ಮತ್ತು ಕೋರಹ. ಇವರೇ ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ ಒಹೊಲೀಬಾಮಳ ಸಂತಾನದವರು.

19 ಎದೋಮನೆನ್ನಿಸಿಕೊಳ್ಳುವ ಏಸಾವನಿಂದ ಹುಟ್ಟಿದ ಕುಲಗಳಿಗೆ ಇವರೇ ಮುಖಂಡರು.

20 ¶ ಆ ಸೀಮೆಯ ಮೂಲನಿವಾಸಿಗಳು ಹೋರಿಯನಾದ ಸೇಯೀರಿನಿಂದ ಹುಟ್ಟಿದವರು. ಅವರು ಯಾರೆಂದರೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,

21 ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ಯರ ದೇಶದಲ್ಲಿ ಸೇಯೀರನ ಸಂತತಿಯವರಾದ ಹೋರಿಯಲ್ಲಿ ಹುಟ್ಟಿದ ಮುಖಂಡರು.

22 ¶ ಲೋಟಾನನ ಮಕ್ಕಳು: ಹೋರಿ, ಹೇಮಾಮ್, ಲೋಟಾನನ ತಂಗಿ ತಿಮ್ನಾ.

23 ¶ ಶೋಬಾಲನ ಮಕ್ಕಳು: ಅಲ್ವಾನ್, ಮಾನಹತ್, ಗೇಬಾಲ್, ಶೆಫೋ ಮತ್ತು ಓನಾಮ್.

24 ¶ ಸಿಬೆಯೋನನ ಮಕ್ಕಳು: ಅಯ್ಯಾ ಮತ್ತು ಅನಾಹ ಎಂಬವರು. ಈ ಅನಾಹನೇ ತನ್ನ ತಂದೆಯಾದ ಸಿಬಿಯೋನನ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಕಾಡಿನಲ್ಲಿ ಬಿಸಿ ನೀರಿನ ಒರತೆಗಳನ್ನು ಕಂಡುಕೊಂಡವನು.

25 ¶ ಅನಾಹನ ಮಕ್ಕಳು: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.

26 ¶ ದೀಶೋನನ ಮಕ್ಕಳು: ಹೆಮ್ದಾನ್, ಎಷ್ಬಾನ್, ಇತ್ರಾನ್, ಕೆರಾನ್.

27 ¶ ಏಚೆರನ ಮಕ್ಕಳು: ಬಿಲ್ಹಾನ್, ಜಾವಾನ್, ಅಕಾನ್.

28 ¶ ದೀಶಾನನ ಮಕ್ಕಳು: ಊಚ್ ಮತ್ತು ಅರಾನ್.

29 ¶ ಹೋರಿಯರಿಂದ ಹುಟ್ಟಿದ ಮುಖಂಡರು: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ

30 ದೀಶೋನ್, ಏಚೆರ್, ದೀಶಾನ್ ಇವರೇ. ಇವರು ಹೋರಿಯರಿಂದ ಹುಟ್ಟಿದವರಾಗಿ ಸೇಯೀರ್ ಸೀಮೆಯಲ್ಲಿ ಅಧಿಪತ್ಯ ನಡಿಸಿದ ಮುಖಂಡರು.

31 ¶ ಇಸ್ರಾಯೇಲ್ಯರ ಅರಸರು ಆಳುವುದಕ್ಕಿಂತ ಮೊದಲು ಎದೋಮ್ಯರ ದೇಶದಲ್ಲಿ ಆಳುತ್ತಿದ್ದ ಅರಸರ ಚರಿತ್ರೆ:

32 ¶ ಬೆಯೋರನ ಮಗನಾದ ಬೆಲಗನು ಎದೋಮ್ಯರನ್ನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ.

33 ¶ ಬೆಲಗನು ಸತ್ತ ನಂತರ ಬೊಚ್ರದವನಾದ ಜೆರಹನ ಮಗನಾಗಿದ್ದ ಯೋಬಾಬನು ಅಧಿಪತ್ಯಕ್ಕೆ ಬಂದನು.

34 ¶ ಯೋಬಾಬನು ಸತ್ತ ನಂತರ ತೇಮಾನೀಯರ ಹುಷಾಮನು ಅವನಿಗೆ ಬದಲಾಗಿ ಆಳಿದನು.

35 ¶ ಹುಷಾಮನು ಸತ್ತ ನಂತರ ಮೋವಾಬ್ಯರ ಬಯಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.

36 ¶ ಹದದನು ಸತ್ತ ನಂತರ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.

37 ¶ ಸಮ್ಲಾಹನು ಸತ್ತ ಮೇಲೆ ನದಿ ತೀರದಲ್ಲಿರುವ ರೆಹೋಬೋತೂರಿನ ಸೌಲನು ಅರಸನಾದನು.

38 ¶ ಸೌಲನು ಸತ್ತ ನಂತರ ಅಕ್ಬೋರನ ಮಗನಾದ ಬಾಳ್ಹಾನಾನನು ಅರಸನಾದನು.

39 ಅಕ್ಬೋರನ ಮಗನಾದ ಬಾಳ್ಹಾನಾನನು ಸತ್ತ ಮೇಲೆ ಹದರನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಆಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.

40 ¶ ಸ್ಥಳ, ಕುಲ, ಹೆಸರುಗಳ ಪ್ರಕಾರವಾಗಿ ಏಸಾವನಿಂದ ಹುಟ್ಟಿದ ಕುಲಪತಿಗಳ ಹೆಸರುಗಳು ಯಾವುವೆಂದರೆ: ತಿಮ್ನ, ಅಲ್ವಾ, ಯೆತೇತ,

41 ಒಹೋಲಿಬಾಮ, ಏಲಾ, ಪೀನೋನ್,

42 ಕೆನೆಜ್, ತೇಮಾನ್, ಮಿಪ್ಚಾರ್

43 ಮಗ್ದೀಯೇಲ್ ಗೀರಾಮ್ ಇವರೇ ತಮ್ಮ ದೇಶದ ನಿವಾಸ ಸ್ಥಳಗಳ ಪ್ರಕಾರ ಎದೋಮ್ಯರ ಮುಖಂಡರು. ಈ ಎದೋಮ್ಯರ ಮೂಲ ಪುರುಷನೇ ಏಸಾವನು.