كل أسفار ಕನ್ನಡ IRV

ಯೆಶಾಯ 18

ಕನ್ನಡ IRV · الأصحاح 18

66 أصحاحات

ಕನ್ನಡ IRV / ಯೆಶಾಯ / الأصحاح 18

ಕನ್ನಡ IRV · الأصحاح 18

1 ಓಹೋ, ಕೂಷಿನ ನದಿಗಳ ಆಚೆಯಲ್ಲಿರುವ ಸೀಮೆ, ರೆಕ್ಕೆಗಳನ್ನು ಪಟಪಟನೆ ಬಡಿಯುವ ನಾಡು,

2 ರಾಯಭಾರಿಗಳನ್ನು ನೀರಿನ ಮೇಲೆ ಬೆಂಡಿನ ದೋಣಿಗಳಲ್ಲಿ ನದಿಯ ಮಾರ್ಗವಾಗಿ ಕಳುಹಿಸುವ ದೇಶ, ವೇಗವಾಗಿ ಬರುತ್ತಿರುವ ದೂತರೇ, ಎತ್ತರವಾದವರೂ, ನಯವಾದ ಚರ್ಮವುಳ್ಳವರೂ, ಸರ್ವ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ, ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರ ಬಳಿಗೆ ಹೋಗಿರಿ.

3 ಸಮಸ್ತ ಭೂನಿವಾಸಿಗಳೇ, ಲೋಕದ ಸಕಲ ಜನರೇ, ಬೆಟ್ಟಗಳಲ್ಲಿ ಧ್ವಜವನ್ನು ಹಾರಿಸುವಾಗ ನೋಡಿರಿ, ತುತ್ತೂರಿಯನ್ನೂದುವಾಗ ಕೇಳಿರಿ!

4 ಯೆಹೋವನು ನನಗೆ ಹೇಳುವುದೇನೆಂದರೆ, “ಬಿಸಿಲಿನಲ್ಲಿ ಜಳಜಳಿಸುವ ಧಗೆಯಂತೆಯೂ, ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು” ಎಂಬುದೇ.

5 ಕೊಯ್ಲಿನ ಕಾಲಕ್ಕೆ ಮೊದಲು ಮೊಗ್ಗು ಬಿಟ್ಟಾದ ಮೇಲೆ, ಹೂವಿನಿಂದ ಹೀಚು ದ್ರಾಕ್ಷಿ ದೋರೆ ಕಾಯಿಯಾಗುವಾಗ, ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು.

6 ಅವೆಲ್ಲವು ಬೆಟ್ಟದ ಪಕ್ಷಿಗಳಿಗೂ, ಭೂಮಿಯ ಕಾಡುಮೃಗಗಳಿಗೂ ಆಹಾರವಾಗಿ ಬಿದ್ದಿರುವವು. ಬೇಸಿಗೆಯಲ್ಲಿ ಪಕ್ಷಿಗಳಿಗೂ, ಹಿಮಕಾಲದಲ್ಲಿ ಕಾಡುಮೃಗಗಳಿಗೂ ಆಹಾರವಾಗುವುದು.

7 ¶ ಆ ಕಾಲದಲ್ಲಿ ಎತ್ತರವಾದವರೂ, ನುಣುಪಾದ ಚರ್ಮವುಳ್ಳವರೂ, ಸರ್ವದಾ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ, ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರು ಸೇನಾಧೀಶ್ವರನಾದ ಯೆಹೋವನ ನಾಮ ಮಹತ್ವದ ಚೀಯೋನ್ ಪರ್ವತಕ್ಕೆ, ಆತನಿಗೋಸ್ಕರ ಕಾಣಿಕೆಯನ್ನು ತರುವರು.