كل أسفار ಕನ್ನಡ IRV

ಯೆಶಾಯ 21

ಕನ್ನಡ IRV · الأصحاح 21

66 أصحاحات

ಕನ್ನಡ IRV / ಯೆಶಾಯ / الأصحاح 21

ಕನ್ನಡ IRV · الأصحاح 21

1 ¶ ಸಮುದ್ರ ಹಾಗೂ ಅಡವಿಯ ವಿಷಯವಾದ ದೈವೋಕ್ತಿ. ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿಯಂತೆ ಅರಣ್ಯದ ಕಡೆಯ ಭಯಂಕರ ದೇಶದಿಂದ (ದೊಡ್ಡ ಅಪಾಯ) ಬರುತ್ತದೆ ಎಂಬ

2 ಘೋರದರ್ಶನವು ನನಗೆ ತಿಳಿಯ ಬಂದಿದೆ; ಬಾಧಕನು ಬಾಧಿಸುತ್ತಿದ್ದಾನೆ, ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ, ಮುತ್ತಿಗೆ ಹಾಕು! ನಿಮ್ಮ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.

3 ಆದುದ್ದರಿಂದ ನನ್ನ ಸೊಂಟದಲ್ಲಿ ನೋವು ತುಂಬಿದೆ, ಪ್ರಸವವೇದನೆಯಂತಿರುವ ವೇದನೆಯು ನನ್ನನ್ನು ಹಿಡಿದಿದೆ, ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ, ಕಣ್ಣು ಕುರುಡಾಗುವಷ್ಟು ತತ್ತರಗೊಂಡಿದ್ದೇನೆ.

4 ನನ್ನ ಹೃದಯವು ಬಡಿದುಕೊಳ್ಳುತ್ತಿದೆ, ನಡುಕವು ನನ್ನನ್ನು ಆವರಿಸಿಕೊಂಡಿದೆ, ನಾನು ಅಪೇಕ್ಷಿಸುತ್ತಿದ್ದ ರಾತ್ರಿಯು ನನಗೆ ಭಯವಾಗಿ ಪರಿಣಮಿಸಿದೆ.

5 ¶ ಔತಣಕ್ಕೆ ಸಿದ್ಧಪಡಿಸಿಕೊಂಡು, ಚಾಪೆಗಳನ್ನು ಹಾಸಿಕೊಂಡು ತಿಂದು, ಕುಡಿಯುತ್ತಾರೆ; ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಹಚ್ಚಿ ಸಿದ್ಧವಾಗಿ!

6 ಕರ್ತನು ನನಗೆ ಹೇಳುವುದೇನೆಂದರೆ, “ಹೋಗು, ಕಾವಲುಗಾರನನ್ನು ನೇಮಿಸು; ಅವನು ಕಂಡದ್ದನ್ನು ತಿಳಿಸಲಿ.

7 ಅವನು ಜೋಡಿ ಜೋಡಿಯಾಗಿ ಬರುವ ಸವಾರರ ಸಾಲನ್ನೂ, ಕತ್ತೆಗಳ ಮತ್ತು ಒಂಟೆಗಳ ಸಾಲುಗಳನ್ನೂ ನೋಡಿದರೆ, ಬಹಳ ಗಮನದಿಂದ ಕಿವಿಗೊಟ್ಟು ಗಮನಿಸಲಿ” ಎಂಬುದೇ.

8 ಬಳಿಕ ಅವನು ಸಿಂಹದಂತೆ ಕೂಗಿ, “ಕರ್ತನೇ, ಪ್ರತಿ ದಿನವು ನಾನು ಕಾವಲಿನ ಬುರುಜಿನ ಮೇಲೆ ನಿಂತಿದ್ದೇನೆ, ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.

9 ಇಗೋ, ಸವಾರರು ಜೋಡಿ ಜೋಡಿಯಾಗಿ ಬರುತ್ತಾರೆ.” ಅವನು ಕೂಗಿ, “ಬಾಬೆಲ್ ಬಿದ್ದು ಹೋಯಿತು, ಬಾಬೆಲ್ ಬಿದ್ದು ಹೋಯಿತು! ಅದರ ದೇವತೆಗಳ ವಿಗ್ರಹಗಳನ್ನು ಒಡೆದು ನೆಲಸಮ ಮಾಡಿಬಿಟ್ಟರು” ಎಂದು ಹೇಳುವನು.

10 ¶ ನನ್ನ ಕಣದ ದವಸವೇ, ನನ್ನ ಬಡಿತಕ್ಕೆ ಈಡಾದವರೇ! ಇಸ್ರಾಯೇಲರ ದೇವರಾಗಿರುವ ಸೇನಾಧೀಶ್ವರನಾದ ಯೆಹೋವನಿಂದ, ನಾನು ಕೇಳಿದ್ದನ್ನೇ ನಿಮಗೆ ತಿಳಿಸಿದ್ದೇನೆ.

11 ¶ ದೂಮದ ಬಗ್ಗೆ ದೈವೋಕ್ತಿ. ಆತನು ಸೇಯೀರಿನಿಂದ ನನ್ನನ್ನು ಕರೆದು, “ಕಾವಲುಗಾರನೇ, ಈಗ ರಾತ್ರಿ ಎಷ್ಟು ಸಮಯವಾಯಿತು? ಕಾವಲುಗಾರನೇ, ರಾತ್ರಿ ಸಮಯ ಎಷ್ಟು ಕಳೆಯಿತು

12 ¶ ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ; ವಿಚಾರಿಸಬೇಕಾದರೆ ಆಮೇಲೆ ಬಂದು ವಿಚಾರಿಸಿರಿ” ಎಂದು ಕಾವಲುಗಾರನು ಹೇಳಿದನು.

13 ಅರಬಿಯ ವಿಷಯವಾದ ದೈವೋಕ್ತಿ. ಓ ದೇದಾನ್ಯರೇ, ಅರಬಿಯದ ಮರುಭೂಮಿಯಲ್ಲಿ ಇಳಿದುಕೊಳ್ಳಿರಿ.

14 ಬಾಯಾರಿದವರಿಗೆ ನೀರನ್ನು ತಂದುಕೊಡಿರಿ, ತೇಮಾ ದೇಶದ ನಿವಾಸಿಗಳೇ ಓಡಿ ಹೋದವರನ್ನು ರೊಟ್ಟಿಯೊಡನೆ ಎದುರುಗೊಳ್ಳಿರಿ.

15 ಏಕೆಂದರೆ ಹಿರಿದ ಕತ್ತಿ, ಬಾಗಿದ ಬಿಲ್ಲು, ಯುದ್ಧದ ಬಾಧೆ ಇವುಗಳಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.

16 ¶ ಕರ್ತನು ನನಗೆ ಹೇಳುವುದೇನೆಂದರೆ, “ಕೂಲಿಯವನ ವರ್ಷಗಳಂತೆ ಒಂದು ವರ್ಷದೊಳಗೆ ಕೇದಾರಿನ ಸಕಲ ವೈಭವವು ಇಲ್ಲವಾಗುವುದು.

17 ಕೇವಲ ಕೆಲವೇ ಬಿಲ್ಲುಗಾರರೂ ಹಾಗೂ ಕೇದಾರಿನ ಶೂರರೂ ಉಳಿಯುವರು” ಎಂಬುದಾಗಿ ಇಸ್ರಾಯೇಲರ ದೇವರಾದ ಯೆಹೋವನು ನುಡಿದಿದ್ದಾನೆ.