كل أسفار ಕನ್ನಡ IRV

ಯಾಜಕಕಾಂಡ 18

ಕನ್ನಡ IRV · الأصحاح 18

27 أصحاحات

ಕನ್ನಡ IRV / ಯಾಜಕಕಾಂಡ / الأصحاح 18

ಕನ್ನಡ IRV · الأصحاح 18

1 ¶ ಯೆಹೋವನು ಮೋಶೆಯೊಂದಿಗೆ ಮಾತನಾಡಿ,

2 “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮ್ಮ ದೇವರಾಗಿರುವ ಯೆಹೋವನು.

3 ನೀವು ವಾಸವಾಗಿದ್ದ ಐಗುಪ್ತ ದೇಶದ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಬರಮಾಡುವ ಕಾನಾನ್ ದೇಶದ ಆಚರಣೆಗಳನ್ನು ನೀವು ಅನುಸರಿಸಬಾರದು, ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಬಾರದು.

4 ಯೆಹೋವನೆಂಬ ನಾನೇ ನಿಮ್ಮ ದೇವರಾಗಿರುವುದರಿಂದ ನನ್ನ ನಿರ್ಣಯಗಳ ಪ್ರಕಾರವೇ ನೀವು ನಡೆಯಬೇಕು, ನನ್ನ ನಿಯಮಗಳನ್ನು ಅನುಸರಿಸಬೇಕು.

5 ನನ್ನ ಆಜ್ಞಾನಿಯಮಗಳ ಪ್ರಕಾರ ನಡೆದುಕೊಳ್ಳುವವರು ಆ ಆಜ್ಞಾನಿಯಮಗಳ ಮೂಲಕ ಬದುಕುವರು. ಆದುದರಿಂದ ನೀವು ಅವುಗಳನ್ನೇ ಅನುಸರಿಸಬೇಕು; ನಾನು ಯೆಹೋವನು.

6 ¶ “‘ನಿಮ್ಮಲ್ಲಿ ಯಾರೂ ರಕ್ತಸಂಬಂಧವುಳ್ಳ ಸ್ತ್ರೀಯ ಸಹವಾಸವನ್ನು ಮಾಡಬಾರದು, ನಾನು ಯೆಹೋವನು.

7 ತಾಯಿಯನ್ನು ಎಷ್ಟು ಮಾತ್ರವೂ ಸಂಗಮಿಸಬಾರದು, ಆಕೆ ಹೆತ್ತವಳಲ್ಲವೇ; ಸಂಗಮಿಸಿದರೆ ತಂದೆಗೆ ಮಾನಭಂಗವಾಗುವುದು.

8 ಮಲತಾಯಿಯ ಜೊತೆ ಸಂಗಮಿಸಬಾರದು; ಆಕೆ ತಂದೆಗೆ ಹೆಂಡತಿಯಾದವಳಲ್ಲವೇ.

9 ತಂದೆಯ ಮಗಳನ್ನಾಗಲಿ ಅಥವಾ ತಾಯಿಯ ಮಗಳನ್ನಾಗಲಿ ಸಂಗಮಿಸಬಾರದು; ಅವರು ಒಡ ಹುಟ್ಟಿದವರು ಇಲ್ಲವೇ ಪರಸ್ತ್ರೀಯಲ್ಲಿ ಹುಟ್ಟಿದವರಾದರೂ ನಿಮಗೆ ಅಕ್ಕತಂಗಿಯರಲ್ಲವೇ.

10 ಮಗನ ಮಗಳೊಂದಿಗೆ ಅಥವಾ ಮಗಳ ಮಗಳೊಂದಿಗೆ ಸಂಗಮಿಸಬಾರದು; ಅವರು ನಿಮಗೆ ಮಕ್ಕಳಂತಲ್ಲವೇ.

11 ತಂದೆಯ ಮತ್ತೊಬ್ಬ ಹೆಂಡತಿಯಲ್ಲಿ ಹುಟ್ಟಿದವಳ ಜೊತೆ ಸಂಗಮಿಸಬಾರದು; ಆಕೆ ಸಹೋದರಿ.

12 ತಂದೆಯ ಒಡಹುಟ್ಟಿದವಳ ಸಂಗ ಮಾಡಬಾರದು; ಆಕೆ ನಿಮಗೆ ತಂದೆಯ ರಕ್ತಸಂಬಂಧಿ.

13 ತಾಯಿಯ ಒಡಹುಟ್ಟಿದವಳ ಜೊತೆ ಸಂಗಮಿಸಬಾರದು; ಆಕೆ ನಿಮ್ಮ ತಾಯಿಯ ರಕ್ತಸಂಬಂಧಿ.

14 ತಂದೆಯ ಅಣ್ಣತಮ್ಮಂದಿರ ಹೆಂಡತಿಯರ ಜೊತೆ ಸಂಗಮಿಸಬಾರದು. ಅವರು ನಿಮ್ಮ ದೊಡ್ಡಮ್ಮ ಇಲ್ಲವೇ ಚಿಕ್ಕಮ್ಮ ಅಲ್ಲವೇ.

15 ಸೊಸೆಯ ಸಹವಾಸ ಮಾಡಬಾರದು; ಆಕೆ ಮಗನ ಹೆಂಡತಿಯಾದವಳಲ್ಲವೇ.

16 ಅತ್ತಿಗೆ ಮತ್ತು ನಾದಿನಿಯರನ್ನು ಸಂಗಮಿಸಬಾರದು; ಅವರು ಅಣ್ಣ ಅಥವಾ ತಮ್ಮಂದಿರ ಹೆಂಡತಿಯರಲ್ಲವೇ.

17 ಒಬ್ಬ ಸ್ತ್ರೀಯನ್ನು ಮದುವೆಮಾಡಿಕೊಂಡರೆ ಆಕೆಯ ಮಗಳನ್ನಾಗಲಿ ಇಲ್ಲವೇ ಮೊಮ್ಮಗಳನ್ನಾಗಲಿ ಸಂಗಮಿಸಬಾರದು; ಅವರು ರಕ್ತಸಂಬಂಧಿಗಳಾದುದರಿಂದ ಅದು ದುಷ್ಟ ಕಾರ್ಯವೇ.

18 ಹೆಂಡತಿಯು ಜೀವದಿಂದಿರುವಾಗಲೇ ಆಕೆಯ ಒಡಹುಟ್ಟಿದವಳನ್ನು ಮದುವೆಮಾಡಿಕೊಂಡು ಹೆಂಡತಿಗೆ ಮನಸ್ತಾಪವನ್ನು ಉಂಟುಮಾಡಬಾರದು.

19 ¶ “‘ಮುಟ್ಟಿನಿಂದ ಅಶುದ್ಧಳಾದ ಸ್ತ್ರೀಯನ್ನು ಸಂಗಮಿಸಬಾರದು.

20 ಪರಸ್ತ್ರೀ ಸಂಗಮದಿಂದ ಅಶುದ್ಧರಾಗಬಾರದು.

21 ¶ “‘ನಿಮ್ಮ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ನಾನು ಯೆಹೋವನು.

22 ¶ “‘ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು; ಅದು ಅಸಹ್ಯವಾದ ಕೆಲಸ.

23 ಪಶುಸಂಗಮವನ್ನು ಮಾಡಿ ಅಶುದ್ಧರಾಗಬಾರದು. ಯಾವ ಸ್ತ್ರೀಯೂ ಸಂಗಮಕ್ಕಾಗಿ ಪಶುವಿನ ಮುಂದೆ ನಿಲ್ಲಬಾರದು; ಅದು ಸ್ವಭಾವಕ್ಕೆ ವಿರುದ್ಧವಾದದ್ದು.

24 ¶ “‘ಈ ದುರಾಚಾರಗಳಲ್ಲಿ ಯಾವುದರಿಂದಲೂ ನೀವು ಅಶುದ್ಧರಾಗಬಾರದು. ನಾನು ನಿಮ್ಮ ಎದುರಿನಿಂದ ಮೊದಲು ಹೊರಡಿಸಿದ ಜನಾಂಗಗಳವರು ಇಂಥ ದುರಾಚಾರಗಳಿಂದ ಅಶುದ್ಧರಾದರು.

25 ಅವರ ದೇಶವು ಅಶುದ್ಧವಾಗಿ ಹೋದುದರಿಂದ ಅವರ ಪಾಪಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಿದ್ದೇನೆ; ಆ ದೇಶವು ತನ್ನಲ್ಲಿ ವಾಸಿಸುತ್ತಿದ ಜನರನ್ನು ತ್ಯಜಿಸಿತು.

26 ಆದುದರಿಂದ ಸ್ವದೇಶದವರಾದ ನಿಮ್ಮಲ್ಲಿಯೂ ಮತ್ತು ನಿಮ್ಮ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಿಯೂ ಯಾರೂ ಈ ಅಸಹ್ಯವಾದ ಕಾರ್ಯಗಳಲ್ಲಿ ಒಂದನ್ನಾದರೂ ನಡೆಸದೆ ಎಲ್ಲರೂ ನನ್ನ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಬೇಕು.

27 ನಿಮಗಿಂತ ಮುಂಚೆ ಆ ದೇಶದಲ್ಲಿ ಇದ್ದವರು ಇಂಥ ಅಸಹ್ಯವಾದ ಕೆಲಸಗಳನ್ನು ಮಾಡಿದ್ದರಿಂದ ಆ ದೇಶವು ಅಶುದ್ಧವಾಗಿ ಹೋಯಿತಲ್ಲಾ.

28 ಆ ದೇಶವು ನಿಮಗಿಂತ ಮುಂಚೆ ಇದ್ದ ಜನಾಂಗಗಳನ್ನು ತ್ಯಜಿಸಿದ ಪ್ರಕಾರವೇ ನಿಮ್ಮಿಂದ ಅಶುದ್ಧವಾದರೆ ನಿಮ್ಮನ್ನು ತ್ಯಜಿಸಿಬಿಡುತ್ತದೆ.

29 ಯಾವನಾದರೂ ಈ ಅಸಹ್ಯವಾದ ಕೆಲಸಗಳಲ್ಲಿ ಒಂದನ್ನಾದರೂ ಮಾಡಿದರೆ ಅವನನ್ನು ಕುಲದಿಂದ ಹೊರಗೆ ಹಾಕಬೇಕು.

30 ಆದುದರಿಂದ ನಿಮಗಿಂತ ಮುಂಚೆ ನಡೆಯುತ್ತಿದ್ದ ಅಸಹ್ಯವಾದ ಆಚರಣೆಗಳನ್ನು ನಡೆಸಿ ನಿಮ್ಮನ್ನು ಅಶುದ್ಧಮಾಡಿಕೊಳ್ಳದೆ ನನ್ನ ನಿಯಮಗಳನ್ನೇ ಅನುಸರಿಸಿ ನಡೆಯಬೇಕು; ನಾನು ನಿಮ್ಮ ದೇವರಾದ ಯೆಹೋವನು’” ಎಂದು ಹೇಳಿದನು.