All books in ಕನ್ನಡ IRV

ಆದಿಕಾಂಡ 15

ಕನ್ನಡ IRV · chapter 15

50 ಅಧ್ಯಾಯಗಳು

ಕನ್ನಡ IRV / ಆದಿಕಾಂಡ / ಅಧ್ಯಾಯ 15

ಕನ್ನಡ IRV · chapter 15

1 ¶ ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಗಿ ಹೇಳಿದೇನೆಂದರೆ, “ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ ಮತ್ತು ನಿನಗೆ ಅತ್ಯಧಿಕ ಬಹುಮಾನವು ದೊರೆಯುವುದು.”

2 ¶ ಅದಕ್ಕೆ ಅಬ್ರಾಮನು, “ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನು. ಮತ್ತು ನನ್ನ ಆಸ್ತಿಯೆಲ್ಲಾ, ದಮಸ್ಕದವನಾದ ಎಲೀಯೆಜರನ ಪಾಲಾಗುತ್ತದೆಯಲ್ಲಾ?” ಎಂದನು.

3 ಪುನಃ ಅಬ್ರಾಮನು ಹೇಳಿದ್ದೇನೆಂದರೆ, “ನೀನು ನನಗೆ ಸಂತಾನ ಕೊಡಲಿಲ್ಲವಾದ್ದರಿಂದ, ನೋಡು, ನನ್ನ ಮನೆಯಲ್ಲಿ ಹುಟ್ಟಿದವನೇ ನನಗೆ ಬಾಧ್ಯಸ್ಥನಾಗಬೇಕಾಯಿತು” ಎಂದು ಹೇಳಿದನು.

4 ¶ ಯೆಹೋವನ ವಾಕ್ಯವು ಅವನ ಸಂಗಡ ಮಾತನಾಡಿ, “ಈ ಮನುಷ್ಯನು ನಿನಗೆ ಬಾಧ್ಯಸ್ಥನಾಗುವುದಿಲ್ಲ; ಆದರೆ ನಿನ್ನ ಹೊಟ್ಟೆಯಲ್ಲಿ ಹುಟ್ಟುವವನೇ ನಿನಗೆ ಬಾಧ್ಯಸ್ಥನಾಗುವನು” ಎಂದು ಹೇಳಿ ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು,

5 “ಆಕಾಶದ ಕಡೆಗೆ ನೋಡು, ನಕ್ಷತ್ರಗಳನ್ನು ಲೆಕ್ಕಿಸುವುದು ನಿನ್ನಿಂದಾದರೆ ಲೆಕ್ಕಿಸು.” ನಂತರ ಯೆಹೋವನು ಅಬ್ರಾಮನಿಗೆ, “ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂದು ಹೇಳಿದನು.

6 ¶ ಅಬ್ರಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಪರಿಗಣಿಸಿದನು.

7 ¶ ನಂತರ ಆತನು ಅಬ್ರಾಮನಿಗೆ, “ಈ ದೇಶವನ್ನು ನಿನಗೆ ಬಾಧ್ಯಸ್ಥವಾಗಿ ಕೊಡುವುದಕ್ಕೋಸ್ಕರ ನಿನ್ನನ್ನು ಊರ್ ಎಂಬ ಕಲ್ದೀಯರ ಪಟ್ಟಣದಿಂದ ಬರಮಾಡಿದ ಯೆಹೋವನು ನಾನೇ” ಎಂದು ಹೇಳಿದನು.

8 ¶ “ಕರ್ತನಾದ ಯೆಹೋವನೇ, ನಾನು ಇದನ್ನು ಬಾಧ್ಯವಾಗಿ ಹೊಂದುವೆನೆಂದು ತಿಳಿದುಕೊಳ್ಳುವುದು ಹೇಗೆ?” ಎಂದು ಕೇಳಿದನು.

9 ¶ ಅದಕ್ಕೆ ಆತನು ಯೆಹೋವನಿಗೆ, “ನೀನು ಮೂರು ವರ್ಷದ ಮಣಕ, ಒಂದು ಆಡು, ಒಂದು ಟಗರು, ಒಂದು ಬೆಳವಕ್ಕಿ, ಒಂದು ಪಾರಿವಾಳದ ಮರಿಯನ್ನೂ ತೆಗೆದುಕೊಂಡು ಬಾ” ಎಂದನು.

10 ¶ ಅವನು ಇವುಗಳನ್ನೆಲ್ಲಾ ತೆಗೆದುಕೊಂಡು ಬಂದು ಮೃಗಗಳನ್ನು ಎರಡಾಗಿ ಸೀಳಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು; ಪಕ್ಷಿಗಳನ್ನು ಮಾತ್ರ ಸೀಳಲಿಲ್ಲ.

11 ಆ ಪಶುಗಳ ಮೇಲೆ ಹದ್ದುಗಳು ಎರಗಲು ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.

12 ¶ ಹೊತ್ತು ಮುಣುಗುತ್ತಿರುವಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು; ಕಾರ್ಗತ್ತಲು ಅವನ ಮೇಲೆ ಕವಿಯಿತು; ಅವನು ಮಹಾಭೀತಿಯಿಂದ ಭಯಭ್ರಾಂತನಾದನು.

13 ಆಗ ಯೆಹೋವನು ಅಬ್ರಾಮನಿಗೆ, “ನೀನು ಚೆನ್ನಾಗಿ ತಿಳಿಯತಕ್ಕದ್ದೇನೆಂದರೆ, ನಿನ್ನ ಸಂತತಿಯವರು ಅನ್ಯದೇಶದಲ್ಲಿ ಪ್ರವಾಸಿಯಾಗಿ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರ್ಷ ಆ ದೇಶದವರಿಂದ ಬಾಧೆಪಡುವರು.

14 ಅವರನ್ನು ದಾಸರನ್ನಾಗಿ ಮಾಡಿಸಿಕೊಂಡ ಜನಾಂಗವನ್ನು ನಾನು ದಂಡಿಸಿದ ನಂತರ ಅವರು ಬಹಳ ಸಂಪತ್ತುಳ್ಳವರಾಗಿ ಆ ದೇಶದಿಂದ ಬಿಡುಗಡೆಯಾಗಿ ಹೊರಟು ಬರುವರು.

15 ನೀನಂತೂ ಸಮಾಧಾನದೊಡನೆ ಪೂರ್ವಿಕರ ಬಳಿಗೆ ಸೇರುವಿ, ಬಹಳ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ.

16 ನಿನ್ನ ಸಂತತಿಯ ನಾಲ್ಕನೆಯ ತಲೆಮಾರಿನವರು ಇಲ್ಲಿಗೆ ತಿರುಗಿ ಬರುವರು, ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ” ಎಂದು ಹೇಳಿದನು.

17 ¶ ಹೊತ್ತು ಮುಳುಗಿ ಕಾರ್ಗತ್ತಲಾದಾಗ, ಇಗೋ, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಕಾಣಿಸಿ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು.

18 ¶ ಆ ದಿನದಲ್ಲಿ ಯೆಹೋವನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು, “ಐಗುಪ್ತ ದೇಶದ ನದಿಯಿಂದ ಯೂಫ್ರೆಟಿಸ್ ಮಹಾ ನದಿಯವರೆಗೂ ಇರುವ ಈ ದೇಶವನ್ನೆಲ್ಲಾ ನಿನ್ನ ಸಂತತಿಯವರಿಗೆ ಕೊಟ್ಟಿದ್ದೇನೆ.

19 ಕೇನಿಯರೂ, ಕೆನಿಜೀಯರೂ, ಕದ್ಮೋನಿಯರೂ,

20 ಹಿತ್ತಿಯರೂ, ಪೆರಿಜೀಯರೂ, ರೆಫಾಯರೂ,

21 ಅಮೋರಿಯರೂ, ಕಾನಾನ್ಯರೂ, ಗಿರ್ಗಾಷಿಯರೂ, ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ,” ಎಂದು ವಾಗ್ದಾನ ಮಾಡಿದನು.