All books in ಕನ್ನಡ IRV

ಆದಿಕಾಂಡ 16

ಕನ್ನಡ IRV · chapter 16

50 ಅಧ್ಯಾಯಗಳು

ಕನ್ನಡ IRV / ಆದಿಕಾಂಡ / ಅಧ್ಯಾಯ 16

ಕನ್ನಡ IRV · chapter 16

1 ¶ ಅಬ್ರಾಮನ ಹೆಂಡತಿಯಾದ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಐಗುಪ್ತ ದೇಶದವಳಾದ ಹಾಗರಳೆಂಬ ದಾಸಿಯಿದ್ದಳು.

2 ಹೀಗಿರಲಾಗಿ ಸಾರಯಳು ಅಬ್ರಾಮನಿಗೆ, “ಯೆಹೋವನು ನನಗೆ ಮಕ್ಕಳನ್ನು ಕೊಡಲಿಲ್ಲವಲ್ಲಾ; ನೀನು ನನ್ನ ದಾಸಿಯಾದ ಹಾಗರಳ ಬಳಿಗೆ ಹೋಗಬೇಕು; ಒಂದು ವೇಳೆ ಅವಳ ಮೂಲಕ ನನಗೆ ಸಂತಾನವಾದೀತು” ಎಂದು ಹೇಳಲು ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಸಿದನು.

3 ಅಬ್ರಾಮನು ಹತ್ತು ವರ್ಷಗಳ ಕಾಲ ಕಾನಾನ್ ದೇಶದಲ್ಲಿ ವಾಸಿಸಿದ ಮೇಲೆ ಅವನ ಹೆಂಡತಿಯಾದ ಸಾರಯಳು ಐಗುಪ್ತಳಾದ ಹಾಗರಳೆಂಬ ದಾಸಿಯನ್ನು ಕರೆದು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು.

4 ¶ ಅವನು ಹಾಗರಳನ್ನು ಸಂಗಮಿಸಲು ಆಕೆಯು ಬಸುರಾದಳು. ತಾನು ಬಸುರಾದೆನೆಂದು ತಿಳಿದುಕೊಂಡಾಗ ಅವಳು ತನ್ನ ಯಜಮಾನಿಯನ್ನು ತಾತ್ಸಾರ ಮಾಡತೊಡಗಿದಳು.

5 ಆಗ ಸಾರಯಳು ಅಬ್ರಾಮನಿಗೆ, “ನನ್ನ ಗೋಳು ನಿನಗೆ ತಟ್ಟಲಿ; ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಒಪ್ಪಿಸಿದೆನಷ್ಟೆ; ಅವಳು ತಾನು ಬಸುರಾದೆನೆಂದು ತಿಳಿದು ನನ್ನನ್ನು ತಾತ್ಸಾರಮಾಡುತ್ತಿದ್ದಾಳೆ; ನಿನಗೂ ನನಗೂ ನಡುವೆ ಯೆಹೋವನೇ ನ್ಯಾಯತೀರಿಸಲಿ” ಎಂದು ಹೇಳಿದಳು.

6 ¶ ಆಗ ಅಬ್ರಾಮನು, “ನಿನ್ನ ದಾಸಿಯು ನಿನ್ನ ಕೈಯಲ್ಲೇ ಇದ್ದಾಳಲ್ಲಾ; ನಿನ್ನಗೆ ಮನಸ್ಸು ಬಂದಂತೆ ಮಾಡು” ಎಂದನು. ಆಗ ಸಾರಯಳು ಅವಳನ್ನು ಬಾಧಿಸಲು ಅವಳು ಓಡಿಹೋದಳು.

7 ¶ ಅವಳು ಮರಳುಗಾಡಿನಲ್ಲಿ ಶೂರಿನ ಮಾರ್ಗದ ನೀರಿನ ಬುಗ್ಗೆಯ ಹತ್ತಿರ ಇರುವಾಗ ಯೆಹೋವನ ದೂತನು ಅವಳನ್ನು ಕಂಡು,

8 “ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದಿ? ಎಲ್ಲಿಗೆ ಹೋಗುತ್ತೀ?” ಎಂದು ಕೇಳಲು ಅವಳು, “ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಾ ಇದ್ದೇನೆ” ಎಂದಳು.

9 ¶ ಅದಕ್ಕೆ ಯೆಹೋವನ ದೂತನು, “ನೀನು ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಅವಳಿಗೆ ಅಧೀನಳಾಗಿ ನಡೆದುಕೋ” ಎಂದನು.

10 ಅದಲ್ಲದೆ ಯೆಹೋವನ ದೂತನು ಅವಳಿಗೆ, “ನಿನಗೆ ಬಹುಸಂತಾನವಾಗುವಂತೆ ಮಾಡುವೆನು; ನಿನ್ನ ಸಂತತಿಯು ಲೆಕ್ಕಿಸಲಾಗದಷ್ಟು ಹೆಚ್ಚಾಗುವುದು” ಎಂದು ಹೇಳಿದನು.

11 ಯೆಹೋವನ ದೂತನು ಅವಳಿಗೆ, “ನೀನು ಗರ್ಭಿಣಿಯಾಗಿದಿಯಾ; ನಿನಗೆ ಮಗನು ಹುಟ್ಟುವನು; ಯೆಹೋವನು ನಿನ್ನ ಕಷ್ಟದ ಕೂಗಿಗೆ ಕಿವಿಗೊಟ್ಟಿದ್ದರಿಂದ ಆ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಡಬೇಕು.

12 ಆ ಮನುಷ್ಯ ಕಾಡು ಕತ್ತೆಯಂತೆ ಇರುವನು. ಅವನು ಎಲ್ಲರ ಮೇಲೆ ಕೈಯೆತ್ತುವನು; ಹಾಗೆಯೇ ಅವನ ಮೇಲೆ ಎಲ್ಲರೂ ಕೈಯೆತ್ತುವರು. ತನ್ನ ಅಣ್ಣತಮ್ಮಂದಿರಿಗೆ ಎದುರಾಗಿ ವಾಸವಾಗಿರುವನು” ಎಂದು ಹೇಳಿ ಹೋದನು.

13 ¶ ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವನಿಗೆ, “ನೀನು ನನ್ನನ್ನು ನೋಡುವ ದೇವರು” ಎಂದು ಹೆಸರಿಟ್ಟಳು: ಏಕೆಂದರೆ, “ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ” ಎಂದುಕೊಂಡಳು.

14 ಈ ಸಂಗತಿಯಿಂದ ಅಲ್ಲಿರುವ ಬಾವಿಗೆ “ಬೆರ್ ಲಹೈರೋಯಿ” ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ.

15 ¶ ಹಾಗರಳು ಅಬ್ರಾಮನಿಂದ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು.

16 ಹಾಗರಳು ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರ್ಷದವನಾಗಿದ್ದನು.