TSK

TSK · ಯೋಹಾನನು 17:3

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ, ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು. ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ, ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಕಡೆಗಣಿಸಿದರೆ ಆತನು ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.

ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು; ಏಕೆಂದರೆ ನಿನ್ನ ಮೊರೆಹೋಗುವವರನ್ನು ನೀನು ಕೈಬಿಡುವವನಲ್ಲ.

ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು; ಧರ್ಮಾತ್ಮನಾದ ನನ್ನ ಸೇವಕನು ತನ್ನ ಜ್ಞಾನದ ಮೂಲಕ ಬಹು ಜನರನ್ನು ಧರ್ಮಮಾರ್ಗಕ್ಕೆ ತರುವನು; ಅವರ ಅಪರಾಧಗಳನ್ನು ಹೊತ್ತುಕೊಂಡು ಹೋಗುವನು.

ಯೆಹೋವನು ಹೀಗೆನ್ನುತ್ತಾನೆ, “ಜ್ಞಾನಿಯು ತನ್ನ ಜ್ಞಾನಕ್ಕೆ, ಪರಾಕ್ರಮಿಯು ತನ್ನ ಪರಾಕ್ರಮಕ್ಕೆ, ಐಶ್ವರ್ಯವಂತನು ತನ್ನ ಐಶ್ವರ್ಯಕ್ಕೆ ಹೆಚ್ಚಳಪಡದಿರಲಿ.

ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು. ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಯೆಹೋವನು ಹೇಳುತ್ತಾನೆ.

‹“ಯಾರಾದರೂ ನನ್ನ ಹೆಸರಿನಲ್ಲಿ ಇಂಥ ಚಿಕ್ಕ ಮಕ್ಕಳಲ್ಲಿ ಒಂದನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾರಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಮಾತ್ರವಲ್ಲ, ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು”› ಎಂದು ಹೇಳಿದನು.

‹ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ಅಪರಾಧಿಯೆಂದು ಖಂಡಿಸಲಿಕ್ಕೆ ಕಳುಹಿಸಲಿಲ್ಲ.›

‹ನನಗಂತೂ ಯೋಹಾನನ ಸಾಕ್ಷಿಗಿಂತ ದೊಡ್ಡದಾದಸಾಕ್ಷಿ ಉಂಟು. ಹೇಗೆಂದರೆ, ಪೂರೈಸುವುದಕ್ಕೆ ತಂದೆಯು ನನಗೆ ಕೊಟ್ಟಿರುವ ಕೆಲಸಗಳೇ, ಅಂದರೆ ನಾನು ಮಾಡುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.›

‹ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ. ನಿತ್ಯಜೀವಕ್ಕಾಗಿ ಉಳಿಯುವ ಆಹಾರಕ್ಕಾಗಿ ದುಡಿಯಿರಿ, ಇಂಥಾ ಆಹಾರವನ್ನು ಮನುಷ್ಯಕುಮಾರನು ನಿಮಗೆ ಕೊಡುವನು. ಇದಕ್ಕಾಗಿ ತಂದೆಯಾದ ದೇವರು ಆತನ ಮೇಲೆ ಮುದ್ರೆ ಹಾಕಿ ನೇಮಿಸಿದ್ದಾನೆ”› ಎಂದನು.

‹ಆದರೆ ನಾನು ಆತನನ್ನು ಬಲ್ಲೆನು ಏಕೆಂದರೆ, ನಾನು ಆತನ ಕಡೆಯಿಂದ ಬಂದವನು ಮತ್ತು ಆತನೇ ನನ್ನನ್ನು ಕಳುಹಿಸಿದನು”› ಎಂದು ಕೂಗಿ ಹೇಳಿದನು.

ಯೇಸು ‹“ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ ನನ್ನ ಮಹಿಮೆಯು ಏನೂ ಅಲ್ಲ. ನನ್ನನ್ನು ಮಹಿಮೆಪಡಿಸುವವನು ನನ್ನ ತಂದೆಯೇ, ನೀವು ಆತನನ್ನು ನಿಮ್ಮ ದೇವರು ಅನ್ನುತ್ತೀರಿ,›

‹ನೀನು ನನಗೆ ಯಾವಾಗಲೂ ಕಿವಿಗೊಡುತ್ತೀ ಎಂದು ನನಗೆ ತಿಳಿದೇ ಇದೆ. ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿರುವಿ ಎಂದು ಸುತ್ತಲೂ ನಿಂತಿರುವ ಈ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದ್ದೇನೆ”› ಎಂದು ಹೇಳಿದನು.

ಯೇಸು ಅವನಿಗೆ, ‹“ಫಿಲಿಪ್ಪನೇ, ನಾನು ಇಷ್ಟು ಕಾಲ ನಿಮ್ಮ ಜೊತೆಯಲ್ಲಿಯೇ ಇದ್ದರೂ ಇನ್ನೂ ನೀನು ನನ್ನನ್ನು ತಿಳಿಯಲಿಲ್ಲವೇ! ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ, ಮತ್ತು ನಮಗೆ ತಂದೆಯನ್ನು ತೋರಿಸು ಎಂದು ನೀನು ಹೇಳುವುದಾದರು ಹೇಗೆ?›

‹ಹೇಗೆಂದರೆ, ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿದ್ದಾರೆ ಮತ್ತು›‹ನಾನು ನಿನ್ನ ಬಳಿಯಿಂದ ಬಂದವನೆಂದು ಇವರು ನಿಜವಾಗಿ ತಿಳಿದು, ನೀನೇ ನನ್ನನ್ನು ಕಳುಹಿಸಿದ್ದೀ ಎಂದು ನಂಬಿದ್ದಾರೆ.›

‹ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ ಇರುವಂತೆ ಇವರೂ ಐಕ್ಯತೆಯಲ್ಲಿ ಪರಿಪೂರ್ಣರಾಗಿರಲಿ. ಹೀಗೆ ನೀನು ನನ್ನನ್ನು ಕಳುಹಿಸಿದ್ದೀ, ಎಂದೂ ಮತ್ತು ನೀನು ನನ್ನನ್ನು ಪ್ರೀತಿಸಿದಂತೆ, ಇವರನ್ನೂ ನೀನು ಪ್ರೀತಿಸುತ್ತೀ ಎಂದು ಲೋಕವು ತಿಳಿದುಕೊಳ್ಳುವುದು.›

ಆದ್ದರಿಂದ ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದರ ವಿಷಯದಲ್ಲಿ, “ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದು” ನಮಗೆ ತಿಳಿದಿದೆ ಮತ್ತು “ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ” ಬಲ್ಲೆವು.

ಯಾಕೆಂದರೆ “ಕತ್ತಲೆಯೊಳಗಿನಿಂದ ಬೆಳಕು ಪ್ರಕಾಶಿಸಲಿ” ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಮಹಿಮೆಯ ಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವುದಕ್ಕಾಗಿ ನಮ್ಮ ಹೃದಯಗಳಲ್ಲಿ ಪ್ರಕಾಶಿಸಿದನು.

ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು.

ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ “ಕರ್ತನನ್ನು ತಿಳಿದುಕೊಳ್ಳಿರಿ” ಎಂದು ಬೋಧಿಸಬೇಕಾಗಿರುವುದಿಲ್ಲ. ಏಕೆಂದರೆ ಹೀನರಾದವರು ಮೊದಲುಗೊಂಡು ಉನ್ನತರಾದವರ ತನಕ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು.

ತಂದೆಯು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವುದನ್ನು ನಾವು ತಿಳಿದಿದ್ದೇವೆ ಮತ್ತು ಅದರ ವಿಷಯದಲ್ಲಿ ನಾವು ಸಾಕ್ಷಿ ಹೇಳುತ್ತೇವೆ.

ದೇವರ ಮಗನು ಈ ಲೋಕಕ್ಕೆ ಬಂದು ನಾವು ಸತ್ಯವಾಗಿರುವಾತನನ್ನು ಅರಿತುಕೊಳ್ಳುವ ಹಾಗೆ ನಮಗೆ ವಿವೇಕವನ್ನು ಕೊಟ್ಟಿದ್ದಾನೆಂಬುದು ನಮಗೆ ಗೊತ್ತಿದೆ, ಮತ್ತು ನಾವು ದೇವರ ಮಗನಾದ ಯೇಸುಕ್ರಿಸ್ತನಲ್ಲಿ ಇರುವವರಾಗಿ ಸತ್ಯದೇವರಾಗಿರುವಾತನಲ್ಲಿದ್ದೇವೆ. ಈ ಕ್ರಿಸ್ತನೇ ಸತ್ಯದೇವರೂ, ನಿತ್ಯಜೀವವೂ ಆಗಿದ್ದಾನೆ.